ಮಧುರಚೆನ್ನ	
	1903-53, ಚಿಂತಕರು, ಲೇಖಕರು. ಚೆನ್ನಮಲ್ಲಪ್ಪ ಗಲಗಲಿ ಇವರು ಹೆಸರು. ಮಧುರ ಚೆನ್ನ ಇವರ ಕಾವ್ಯನಾಮ. ಹುಟ್ಟಿದ್ದು ಇಂಡಿ ತಾಲ್ಲೂಕಿನ ಹಲಸಂಗಿಯ ರೈತ ಮನೆತನವೊಂದರಲ್ಲಿ. ತಂದೆ ಸಿದ್ಧಲಿಂಗಪ್ಪ. ತಾಯಿ ಅಂಬವ್ವ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ತಾಯಿಯ ಪೋಷಣೆಯಲ್ಲಿ ಬೆಳೆದರು. ಹುಟ್ಟೂರಿನ ಶಾಲೆಯಲ್ಲಿ ವ್ಯಾಸಂಗ ಮಾಡಿ, ಕನ್ನಡ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದರು (1921). ಮುಂದಿನ ವ್ಯಾಸಂಗಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದಂತೆ ಇವರು ಮನಸ್ಸು ತತ್ತ್ವಜಿಜ್ಞಾಸೆಯತ್ತ ಹರಿಯಿತು; ಸಾಹಿತ್ಯಕ್ಕೆ ಒಲಿಯಿತು. ಇದರಿಂದಾಗಿ ಇವರು ಶಾಲಾ ಶಿಕ್ಷಣ ನಿಂತಿತು. ಆದರೆ ಓದಿನಲ್ಲಿ ವಿಪರೀತ ಗೀಳು ಹುಟ್ಟಿದ್ದರಿಂದ ಸ್ವತಂತ್ರವಾಗಿ ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳನ್ನು ಕಲಿತರು. ವಚನ ವಾಙ್ಮಯವನ್ನು ವಿಸ್ತಾರವಾಗಿ ಅಧ್ಯಯನ ಮಾಡಿದರಲ್ಲದೆ. ಜನಪದ ಸಾಹಿತ್ಯದ ತತ್ತ್ವ ಸೌಂದರ್ಯಗಳನ್ನರಿತು ಅದರಿಂದಲೂ ಪ್ರಭಾವಿತರಾದರು. ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದ ಮತ್ತು ರವೀಂದ್ರರ ಕೃತಿಗಳನ್ನು ಅಭ್ಯಾಸಮಾಡಿದರು. ಮಹರ್ಷಿ ಅರವಿಂದರ ನವ ವೇದಾಂತದ ಆಕರ್ಷಣೆಗೂ ಒಳಗಾದ ಇವರು ಪಾಂಡಿಚೇರಿಯ ಅರವಿಂದಾಶ್ರಮದ ಭಕ್ತರಾದರು. ಪ್ರತಿವರ್ಷವೂ ಅರವಿಂದಾಶ್ರಮಕ್ಕೆ ಹೋಗಿಬರುತ್ತಿದ್ದ ಮಧುರಚೆನ್ನರು. ಹಲಸಂಗಿಯಲ್ಲಿ ತಮ್ಮ ಸ್ನೇಹಿತರ ನೆರವಿನಿಂದ ಶ್ರೀ ಅರವಿಂದ ಮಂಡಳ ಮತ್ತು ಗೆಳೆಯರ ಗುಂಪು (ಹಲಸಂಗಿ ಸಹೋದರರು) ಎಂಬ ಸಂಸ್ಥೆಗಳನ್ನು ಸ್ಥಾಪಿಸಿ ಶ್ರೀ ಅರವಿಂದ ತತ್ತ್ವಗಳ ಪ್ರಚಾರ ಮತ್ತು ಸಾಹಿತ್ಯ ಚಟುವಟಿಕೆಗಳನ್ನೂ ಗ್ರಂಥ ಪ್ರಕಟಣೆಗಳನ್ನೂ ನಿರ್ವಹಿಸಿದರು. 

	ಮಧುರಚೆನ್ನರು ತತ್ತ್ವಶಾಸ್ತ್ರ, ಇತಿಹಾಸ. ಸಾಹಿತ್ಯ, ಭಾಷಾಶಾಸ್ತ್ರ. ಜಾನಪದ ಮುಂತಾದ ಅನೇಕ ವಿಷಯಗಳನ್ನು ಕುರಿತು ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಶಬ್ದಸಾಮ್ರಾಜ್ಯದಲ್ಲಿ ಮಂತ್ರ ಶಕ್ತಿಯ ಪುನರುಜ್ಜೀವನ, ಸತ್ಯ, ಹಲಸಂಗಿಯ ಲಾವಣೀಕಾರ ಖಾಜಾ ಭಾಯಿ, ಇತಿಹಾಸದ ಕವಿಗಳು, ಬಸವಣ್ಣನವರ ಭೋಜನಶಾಲೆ, ವಿಜಯಪುರ ಶಿಲಾಶಾಸನ-ಇವು ಇವರ ಮುಖ್ಯ ಲೇಖನಗಳು. ನನ್ನನಲ್ಲ(1933) ಇವರ ಒಂದು ಕವನ ಸಂಗ್ರಹ. ಇದು ತುಂಬ ಜನಪ್ರಿಯವಾಗಿದೆ. ವಿಪುಲವಾದ ವ್ಯಂಜನಶಕ್ತಿ, ರಸಿಕರನ್ನು ಅಂತರ್ಮುಖಗೊಳಿಸುವ ಭಾವಾವೇಶ, ಸಹೃದಯರೆದೆಯಲ್ಲಿ ಹೊರಹೊಮ್ಮಿಸುವ ದಿವ್ಯವಾಸ್ತವ್ಯ-ಇವೇ ಇವರ ಕಾವ್ಯಗುಣಗಳು. `ಆನಂದಂ ಬೇಕು ತನ್ನೊಳ್ ಏನೊಂದುಂವಾಣಿಯಾಗಳ್ ಎಂಬುದು ಕವಿತ್ವವನ್ನು ಕುರಿತ ಇವರ ಅಭಿಪ್ರಾಯ. ಆತ್ಮ ಸಂಶೋಧನೆ (1935). ಪೂರ್ವಯೋಗದ ಪಥದಲ್ಲಿ (1960) ಇವು ಆಧ್ಯಾತ್ಮಕ್ಕೆ ಸಂಬಂಧಿಸಿದ ಇವರ ಗ್ರಂಥಗಳು. ಪೂರ್ವರಂಗ (1932). ಕಾಳರಾತ್ರಿ (1933), ಬೆಳಕು (1937) ಈ ಕೃತಿಗಳಲ್ಲಿ ಇವರ ಆತ್ಮಕಥನವಿದೆ. ಕನ್ನಡಿಗರ ಕುಲಗುರು ಶ್ರೀವಿದ್ಯಾರಣ್ಯರು (ಸಿಂಪಿಲಿಂಗಣ್ಣನವರೊಂದಿಗೆ) ಎಂಬುದು ಇವರು ಪ್ರಕಟಸಿರುವ ಒಂದು ಜೀವನ ಚರಿತ್ರೆ. ಮಾತೃವಾಣಿ, ಧರ್ಮಕ್ಷೇತ್ರೇ ಕುರುಕ್ಷೇತ್ರೇ, ಪೂರ್ಣಯೋಗ-ಇವು ಇವರು ಅನುವಾದಿಸಿರುವ ಗ್ರಂಥಗಳಲ್ಲಿ ಕೆಲವು.

 	ಮಧುರಚೆನ್ನರು ಅನೇಕ ಜನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಇವರು ಜನಪದ ಗೀತೆಗಳನ್ನು ಹಾಡುವುದರಲ್ಲೂ ಹೆಸರುಗೊಂಡಿದ್ದರು. ಬಿಜಾಪುರದಲ್ಲಿ ನಡೆದ 9ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೀಸುವಕಲ್ಲಿನ ಹಾಡುಗಳು ಎಂಬ ಒಂದು ಪ್ರಬಂಧವನ್ನು ಓದಿದರು. ಸೊಲ್ಲಾಪುರದಲ್ಲಿ ನಡೆದ 33ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು.

	ಮಧುರಚೆನ್ನರು ತೀರಿಕೊಂಡಿದ್ದು 1953 ಆಗಸ್ಟ್ 15ರಂದು ಕನ್ನಡಸಾಹಿತ್ಯ ಪರಿಷತ್ತು ಇವರನ್ನು ಕುರಿತ ಜೀವನ ಚರಿತ್ರೆಯನ್ನು ಪ್ರಕಟಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ